ಇಂಪೇಷಿಯೆನ್ಸ್ - 
ಬಾಲ್ಸಾಮಿನೇಸಿ ಕುಟುಂಬಕ್ಕೆ ಸೇರಿದ ಒಂದು ಸಸ್ಯ; ಸುಮಾರು 600-700 ರಷ್ಟು ಪ್ರಭೇದಗಳಿವೆ. ಇವು ಹೆಚ್ಚಾಗಿ ಬೆಳೆಯುವ ಸ್ಥಳಗಳು ಯುರೇಷ್ಯ, ಆಫ್ರಿಕ, ಮಡಗಾಸ್ಕರ್ ಇತ್ಯಾದಿ. ಉತ್ತರ ಮತ್ತು ಮಧ್ಯ ಅಮೆರಿಕದ ಪ್ರದೇಶಗಳಲ್ಲಿ ಸುಮಾರು 6 ಪ್ರಭೇದಗಳಿರುವುದು ಕಂಡುಬಂದಿದೆ. ಭಾರತ ಮತ್ತು ಸಿಲೋನುಗಳಲ್ಲಿ ಸುಮಾರು 150 ಪ್ರಭೇದಗಳಿವೆ. ಈ ಗಿಡಗಳ ಕಾಯಿಗಳನ್ನು ಮುಟ್ಟಿದೊಡನೆ ಅವು ಸಿಡಿಯುವುದರಿಂದ ಇಂಪೇಷಿಯೆನ್ಸ್ (ಅಸಹನೆ) ಎಂದು ಹೆಸರು ಬಂದಿದೆ. ಕೆಲವು ವಾರ್ಷಿಕ ಸಸ್ಯಗಳಾಗಿದ್ದರೆ ಮತ್ತೆ ಕೆಲವು ಪ್ರಭೇದಗಳು ದ್ವೈವಾರ್ಷಿಕ ಇಲ್ಲವೇ ಬಹುವಾರ್ಷಿಕ ಸಸ್ಯಗಳಾಗಿವೆ. ಕೆಲವು ಸಣ್ಣ ಸಣ್ಣ ಮೂಲಿಕೆಗಳಾಗಿದ್ದರೆ ಮತ್ತೆ ಕೆಲವು ಪೊದೆಗಳಂತೆ ದಟ್ಟವಾಗಿ ಬೆಳೆಯುತ್ತವೆ. ಕೆಲವಂತೂ ಅಪ್ಪುಗಿಡದಂತೆ ಬೆಳೆಯುತ್ತವೆ. ಉದಾಹರಣೆ-ಇಂ. ಜರ್ಡೋನಿಯೆ, ಇಂ. ಆರಿಕ್ಯುಲೇಟಿ, ಇಂ. ಪ್ಯಾರಸಿಟಿಕ. ಸಸ್ಯಗಳ ಎಲೆಗಳು ಸರಳವಾಗಿವೆ. ಪುಷ್ಪಗಳು ದ್ವಿಪಾಶ್ರ್ವ ಸಮರೂಪಿಗಳು; ಎಲೆಗಳ ಕಂಕುಳಲ್ಲಿ ಇಲ್ಲವೆ ರೆಸೀಮ್ ಅಥವಾ ಅಂಬೆಲ್ ಹೂ ಗೊಂಚಲುಗಳಲ್ಲಿ ಹೂಬಿಡುತ್ತವೆ; ಪುಷ್ಪಗಳಲ್ಲಿ 3-5 ಪುಷ್ಪಪತ್ರಗಳಿವೆ; ಪುಷ್ಪಪತ್ರಗಳು ಮುರಿದಾಗ ಸಾಮಾನ್ಯವಾಗಿ ಎರಡು ಹಸಿರು ಬಣ್ಣಕ್ಕಿರುತ್ತವೆ; ಒಂದರ ಬಣ್ಣ ಮಾತ್ರ ಪುಷ್ಪದಳದ್ದೇ. ಪುಷ್ಪದಳಗಳು 3-5; ಕೇಸರಗಳು 5, ಅಂಡಾಶಯದಲ್ಲಿ 5 ಭಾಗಗಳಿವೆ; ಅವುಗಳಲ್ಲಿ ಅನೇಕ ಅಂಡಕಗಳಿವೆ. ಕಾಯಿಗಳು ಕ್ಯಾಪ್ಸೂಲ್ ಜಾತಿಯವು; ಅವುಗಳಲ್ಲಿ 5 ಬೇರೆ ಬೇರೆ ಕವಾಟಗಳಿವೆ. ಇಂಪೇಷಿಯೆನ್ಸ್ ಜಾತಿಯ ಅನೇಕ ಏಕವಾರ್ಷಿಕ ಸಸ್ಯಗಳನ್ನು ಕೈತೋಟಗಳಲ್ಲಿ, ಉದ್ಯಾನವನಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುತ್ತಾರೆ. ಇವು ಹೂಬಿಡುವ ಕಾಲದಲ್ಲಿ ಅತ್ಯಂತ ಸುಂದರಸಸ್ಯಗಳು. ಬೇಸಗೆಯಲ್ಲಿ ಹೂಬಿಡುವ ಈ ಸಸ್ಯಗಳ ಬೀಜಗಳನ್ನು ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮಾರ್ಚ್ ತಿಂಗಳ ಕೊನೆಯ ವಾರದಲ್ಲಿ ನೆಡುತ್ತಾರೆ. ಆದರೆ ಉತ್ತರ ಭಾರತದ ಬಯಲು ಪ್ರದೇಶಗಳಲ್ಲಿ ಜೂನ್ ಜುಲೈ ಕಾಲದಲ್ಲೇ ಇವನ್ನು ಸಾಲುಗಿಡಗಳಾಗಿ ಬೆಳೆಸುವುದು ಹೆಚ್ಚು. ಇಂ.ಬಾಲ್ಸಾಮಿನ ಗಿಡದ ಬೀಜಗಳಿಂದ ಒಂದು ಬಗೆಯ ಎಣ್ಣೆ ತೆಗೆಯುತ್ತಾರೆ. ಇದನ್ನು ಅಡುಗೆಗೆ, ದೀಪ ಉರಿಸಲಿಕ್ಕೆ ಮುಂತಾಗಿ ಉಪಯೋಗಿಸಬಹುದು. ಮದ್ಯಸಾರದಲ್ಲಿ ತೆಗೆದ ಹೂಗಳ ರಸ ತಂಪು; ಇದು ರಕ್ತಪರಿಚಲನೆಯನ್ನು ಕ್ರಮಪಡಿಸುತ್ತದೆಂದು ಹೇಳಲಾಗಿದೆ. ಗಿಡದ ಕಷಾಯ ವಾಂತಿ ಭೇದಿ ಕಾಯಿಲೆಗೆ ಒಳ್ಳೆ ಶಮನಕಾರಿ. ಇದೇ ಜಾತಿಗೆ ಸೇರಿದ ಇಂ.ಗ್ಲಾಂಡುಲಿಗೆರ, ಇಂ. ಟಿಂಜೆನ್ಸ್ ಇನ್ನೂ ಮುಂತಾದ ಅನೇಕ ಪ್ರಭೇದಗಳ ಬೀಜಗಳನ್ನು ತಿನ್ನಲು ಉಪಯೋಗಿಸುತ್ತಾರೆ. ಇಂ. ಸಲ್ಕೇಟ ಎಂಬ ಪ್ರಭೇದ ಹಿಮಾಲಯದಲ್ಲಿ ಸುಮಾರು 12,000 ಎತ್ತರದಲ್ಲಿ ಬೆಳೆಯುತ್ತದೆ. ಸುಮಾರು 4-10 ಎತ್ತರಕ್ಕೆ ಬೆಳೆಯುವ ಈ ಸಸ್ಯದ ಬೀಜಗಳಿಂದಲೂ ಎಣ್ಣೆಯನ್ನು ತಯಾರಿಸುತ್ತಾರೆ. ಹಿಮಾಲಯದಲ್ಲೇ ಕಾಶ್ಮೀರ, ನೇಪಾಳ ಪ್ರದೇಶಗಳಲ್ಲಿ ಬೆಳೆಯುವ ಇಂಪೇಷಿಯೆನ್ಸ್ ಬೀಜದಿಂದ ತೆಗೆದ ಎಣ್ಣೆಯನ್ನು ಮೆರುಗೆಣ್ಣೆಗಳನ್ನು ತಯಾರಿಸಲು ಹೇರಳವಾಗಿ ಉಪಯೋಗಿಸುತ್ತಾರೆ. ಇತ್ತೀಚೆಗೆ ಈ ಜಾತಿಯ ಚೈನೆನ್ಸಿಸ್ ಎಂಬ ಪ್ರಭೇದಕ್ಕೆ ಔಷಧ ಪ್ರಾಮುಖ್ಯ ಹೆಚ್ಚಾಗಿದೆ.

(ಎಸ್.ಎನ್.ಆರ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ